ಬದರೀ - 
	ಹಿಮಾಲಯ ಪರ್ವತಶ್ರೇಣಿಗಳ ಮಧ್ಯದಲ್ಲಿರುವ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ. ಇಲ್ಲಿಯ ಮುಖ್ಯ ದೇವಸ್ಥಾನ ನಾರಾಯಣ ಮಂದಿರ. ಬದರೀನಾಥ ಎಂದೂ ಬದರೀನಾರಾಯಣ ಎಂದೂ ಈ ದೇವರನ್ನು ಕರೆಯುವ ರೂಢಿಯಿದೆ. ಹರಿದ್ವಾರ ಹಾಗೂ ಹೃಷಿಕೇಶಗಳ ಮೂಲಕ ಇಲ್ಲಿಗೆ ಹೋಗಲು ರಸ್ತೆ ಮೋಟಾರು ರಸ್ತೆ ಮತ್ತು ಕಾಲು ರಸ್ತೆ ಇವೆ. ಹರಿದ್ವಾರದಿಂದ ಸುಮಾರು 300 ಕಿ.ಮೀ. ದೂರದಲ್ಲಿದೆ. ಈ ಕ್ಷೇತ್ರವನ್ನು ಬದರೀಧಾಮ, ಬದರೀ ವಿಶಾಲ ಎಂದೂ ಕರೆಯಲಾಗಿದೆ. ಹಿಂದೊಮ್ಮೆ ಇಲ್ಲಿ ಬೋರೆಯ (ಬದರೀ-ಬದ್ರೀ) ಮರಗಳು ವಿಶೇಷವಾಗಿದ್ದುದರಿಂದ ಈ ಹೆಸರು ಬಂದಿತೆಂದು ಐತಿಹ್ಯ. ಅಲಕನಂದಾ ನದೀತೀರದಲ್ಲಿದೆ. ಸಮುದ್ರಮಟ್ಟಕ್ಕಿಂತ ಸುಮಾರು 3,124 ಮೀ. ಎತ್ತರದಲ್ಲಿದೆ.

	ದೇವಪ್ರಯಾಗ, ರುದ್ರಪ್ರಯಾಗ, ಕರ್ಣಪ್ರಯಾಗ, ನಂದಪ್ರಯಾಗ ಮತ್ತು ವಿಷ್ಣುಪ್ರಯಾಗ ಎಂದು ಪ್ರಸಿದ್ಧ ಪಂಚಪ್ರಯಾಗಗಳು ಹೃಷಿಕೇಶದಿಂದ ಬದರೀ ವಿಶಾಲದವರೆಗೆ ದಾರಿಯಲ್ಲಿರುವ ಮುಖ್ಯಸ್ಥಳಗಳು. ಇವು ಸಂಗಮ ಸ್ಥಾನಗಳೂ ಕೂಡ. ಲಕ್ಷಣಝೂಲಾ, ಶ್ರೀನಗರ, ಚಮೇಲಿ, ಪೀಪಲ್‍ಕೋಟಿ, ಜೋಶೀಮಠ, ಬಲದೌಡಾಚಟ್ಟೀ, ಪಾಂಡುಕೇಶ್ವರ, ಶೇಷಧಾರಾ, ಹನುಮಾನ್ ಚಟ್ಟೇ, ಕಾಂಚನಗಂಗಾ, ದೇವದೇಖನೀ ಇತ್ಯಾದಿ ಸ್ಥಳಗಳು.

	ದೇವಪ್ರಯಾಗದಲ್ಲಿ ಅಲಕನಂದಾ ಹಾಗೂ ಭಾಗೀರಥಿ ನದಿಗಳ ಸಂಗಮಸ್ಥಾನವಿದೆ. ಇಲ್ಲಿಂದ ಮುಂದೆ ಹರಿಯುವ ನದಿಯೇ ಪ್ರಸಿದ್ಧವಾದ ಗಂಗಾ. ಇಲ್ಲಿ ರಘುನಾಥ ಮಂದಿರ ಎಂಬ ಸುಂದರ ದೇವಸ್ಥಾನವಿದೆ. ರುದ್ರಪ್ರಯಾಗದಲ್ಲಿ ಅಲಕನಂದಾ ನದಿಗೆ ಮಂದಾಕಿನೀ ನದಿ ಬಂದು ಸೇರಿ ಸಂಗಮವಾಗಿದೆ. ರುದ್ರಪ್ರಯಾಗದಿಂದ ಕೇದಾರನಾಥ ಕ್ಷೇತ್ರಕ್ಕೆ ದಾರಿಯೊಡೆಯುತ್ತದೆ. ಅದು ಇಲ್ಲಿಂದ ಸುಮಾರು 80 ಕಿ.ಮೀ. ದೂರದಲ್ಲಿದೆ. ಕರ್ಣಪ್ರಯಾಗದಲ್ಲಿ ಅಲಕನಂದಾ ನದಿಗೆ ಪಿಂದಾರ ನದಿ ಬಂದು ಸೇರಿದೆ. ಪಿಂದಾರದ ಜಲ ನೋಡುವ ಕಣ್ಣಿಗೆ ಅತ್ಯಂತ ನೀಲಿ ಬಣ್ಣದ್ದಾಗಿ ರಮ್ಯವಾಗಿದೆ. ಕರ್ಣಪ್ರಯಾಗದಿಂದ ಸುಮಾರು 18 ಕಿ.ಮೀ. ದೂರದಲ್ಲಿ ಪಂಚಬದರೀ ಸ್ಥಳಗಳಲ್ಲಿ ಒಂದಾದ ಶ್ರೀ ಆದಿಬದರೀ ಇದೆ. ನಂದಪ್ರಯಾಗದಲ್ಲಿ ಅಲಕನಂದಾ ನದಿಗೆ ಮಂದಾಕಿನೀ ಎಂಬ ನದಿ ಬಂದು ಸೇರಿದೆ. ವಿಷ್ಣು ಪ್ರಯಾಗ-ಅಂತಿಮ ಪ್ರಯಾಗ ಇಲ್ಲಿ ಅಲಕನಂದಾ ನದಿಗೆ ಧೌಲೀಗಂಗಾ ನದಿ ಬಂದು ಸೇರಿದೆ. ಸಂಗಮ ಸ್ಥಾನ ತುಂಬ ಆಳವಾಗಿದ್ದು ಭಯಾನಕ ಹಾಗೂ ದುರ್ಗಮವಾಗಿದೆ. ಎಡಬಲದಲ್ಲಿ ನರ-ನಾರಾಯಣ ಎಂಬ ಪರ್ವತಗಳಿವೆ. ಹೇಮಕುಂಡ ಎಂಬ ಸುಂದರ ಸರೋವರವಿದೆ; ಗುರುದ್ವಾರಗಳಿವೆ.

	ಲಕ್ಷ್ಮಣಝೂಲಾ-ಹೃಷಿಕೇಶದಲ್ಲಿದೆ. ಇದು ಗಂಗಾನದಿಗೆ ಲೋಹ ಹಾಗೂ ಸಿಮೆಂಟಿನಿಂದ ಕಟ್ಟಿರುವ ತೂಗುಸೇತುವೆ, ಹತ್ತಿರ ಲಕ್ಷ್ಮಣ ಮಂದಿರವಿದೆ. ಶ್ರೀನಗರ (ಗಢವಾಲ), ಸಾಧಾರಣ ದೊಡ್ಡ ಊರು. ಇಲ್ಲಿ ಕಾಲೇಜು. ಆಸ್ಪತ್ರೆ ಧರ್ಮಶಾಲೆ ಮುಂತಾದವುಗಳಿವೆ. ಇಲ್ಲಿಂದ ಸುಮಾರು 4 ಕಿ.ಮೀ. ದೂರದಲ್ಲಿ ಬೆಟ್ಟದ ಮೇಲೆ ದೇವಲಗಢ ಎಂಬ ಸುಪ್ರಸಿದ್ಧ ಶಕ್ತಿಪೀಠವಿದೆ, ರಾಮೇಶ್ವರೀ ಮತ್ತು ದುರ್ಗಾದೇವಿಯರ ಪ್ರಾಚೀನ ಮಂದಿರಗಳಿವೆ. ಚಮೇಲಿ-ಲಾಲಸಂಗಾ ಇದರ ಇನ್ನೊಂದು ಹೆಸರು. ಕೇದಾರನಾಥ ಬದರೀನಾಥ ಕ್ಷೇತ್ರಕ್ಕೆ ಹೋಗುವ ರಸ್ತೆ ಇಲ್ಲಿ ಸಂಧಿಸುತ್ತದೆ. ಪಿ ಪಲ್ ಕೋಟಿ-ಇದರ ಸುತ್ತಮುತ್ತಲಲ್ಲಿ ಗರುಡ ಗಂಗಾ, ಪಾತಾಲ ಗಂಗಾ, ರುದ್ರನಾಥ ಕಲ್ಲೇಶ್ವರ ಶ್ರೀವೃದ್ಧ ಬದರೀ ಮುಂತಾದ ಯಾತ್ರಾಸ್ಥಳಗಳಿವೆ. ಜೋಶಿಮಠ ಸಮುದ್ರ ಮಟ್ಟದಿಂದ ಸುಮಾರು 1,890 ಮೀ. ಎತ್ತರದಲ್ಲಿದೆ.

	ಬದರೀ ಕ್ಷೇತ್ರದಲ್ಲಿ ಚಳಿಗಾಲದಲ್ಲಿ ಇರಲು ಸಾಧ್ಯವಿಲ್ಲ. ಆಗ ಅಲ್ಲಿಂದ ಬದರೀನಾಥನ ಉತ್ಸವಮೂರ್ತಿಯನ್ನು ಜೋಶೀಮಠದ ಬದರೀನಾಥ ಮಂದಿರಕ್ಕೆ ತರಲಾಗುತ್ತದೆ. ಬದರೀಕ್ಷೇತ್ರದ ಎಲ್ಲ ವ್ಯವಹಾರಗಳಿಗೂ ಜೋಶಿಮಠದೊಂದಿಗೆ ಸಂಪರ್ಕವಿದೆ. ಜೋಶಿಮಠದ ಬಳಿಯಲ್ಲಿ ಎರಡು ಹಸ್ತಿಕುಂಡಗಳಿವೆ. ಇಲ್ಲಿ ಜಲಧಾರೆಗಳು ಬೀಳುತ್ತವೆ. ಒಂದಕ್ಕೆ ನೃಸಿಂಹಧಾರೆಯೆಂದೂ ಇನ್ನೊಂದಕ್ಕೆ ದಂಡಚಾರಾಧಾರೆಯೆಂದೂ ಹೆಸರು ಇಲ್ಲಿ ನೃಸಿಂಹ ಮಂದಿರ, ಗುರುದ್ವಾರ,     ಶಂಕರಾಚಾರ್ಯರ ನಾಲ್ಕು ಪೀಠಗಳ ಪೈಕಿ ಒಂದು ಇದೆ. ಅಲ್ಲದೆ ಭಾರತೀಯ ರಕ್ಷಣಾದಳದ ಒಂದು ಕೇಂದ್ರವೂ ಉಂಟು. ಇಲ್ಲಿಂದಲೇ ಬದರೀಗೆ ಹೋಗುವ ದಾರಿಯ ಉಸ್ತುವಾರಿ ನಡೆಯುತ್ತದೆ. ಜೋಶೀ ಮಠದಿಂದ ಸುಮಾರು 15 ಕಿಮೀ. ದೂರದಲ್ಲಿ ದಕ್ಷಿಣಕ್ಕೆ ಪಂಚಬದರೀಗಳಲ್ಲೊಂದಾದ ಶ್ರೀಭವಿಷ್ಯ ಬದರೀ ಸ್ಥಳವಿದೆ. ಇಲ್ಲಿಂದ ನೀತಿ ಘಾಟದ ಮೂಲಕ ಕೈಲಾಸ ಪರ್ವತಕ್ಕೆ ದಾರಿ ಹೋಗುತ್ತದೆ. ಜೋಶೀಮಠದಿಂದ ಪಾಂಡುಕೇಶ್ವರಕ್ಕೆ ರಸ್ತೆಯಿದೆ. ಪಾಂಡುಕೇಶ್ವರದಿಂದ ಸುಮಾರು 18 ಕಿ.ಮೀ. ದೂರದಲ್ಲಿ ಬದರೀನಾಥಪುರೀ ಕ್ಷೇತ್ರವಿದೆ.

	ಯಾತ್ರಾರ್ಥಿಗಳಿಗೆ ಈ ಕ್ಷೇತ್ರದರ್ಶನಕ್ಕಾಗಿ ಸರ್ಕಾರ ವೈಶಾಖ ಮಾಸದಿಂದ ರಸ್ತೆಯನ್ನು ತೆರೆಯುತ್ತದೆ. ಚಳಿಗಾಲದಲ್ಲಿ ಇಲ್ಲಿಗೆ ಹೋಗಲು ಅಸಾಧ್ಯ. ಬದರೀನಾಥಪುರೀ ಗ್ರಾಮದ ಮಧ್ಯದಲ್ಲಿ ಅಲಕನಂದಾ ದಂಡೆಯಲ್ಲಿ ಬದರೀನಾಥನ ಭವ್ಯ ಮಂದಿರ ವಿದೆ. ಅಲಕನಂದಾದ ನೀರು ಅತಿ ಶೈತ್ಯ. ಈ ದೇವಸ್ಥಾನವನ್ನು ಗಢವಾಲ ರಾಜರು ಕ್ರಿ.ಶ. 13ನೆಯ ಶತಮಾನದಲ್ಲಿ ಕಟ್ಟಿಸಿದರೆಂದೂ ಅಹಲ್ಯಾಬಾಯಿಹೋಳ್ಕರ್ ಸುವರ್ಣ ಕಳಸವಿಡಿಸಿದಳೆಂದೂ ಹೇಳಲಾಗುತ್ತದೆ. ತಪಕುಂಡ ಎಂಬ ಬಿಸಿನೀರಿನ ಊಟೆಯೂ ಇದೆ. ಇಲ್ಲಿಯ ಮುಖ್ಯದ್ವಾರದ ಎತ್ತರ ಸುಮಾರು 1 ಮೀ. ಅಲ್ಲಿಂದ ಮುಂದಕ್ಕೆ ಸಭಾಮಂಟಪ ಮತ್ತು ಅದಕ್ಕೆ ಹೊಂದಿಕೊಂಡಂತೆ ಗರ್ಭಗೃಹವಿದೆ. ಮಹಾದ್ವಾರದ ಮೇಲೆ ಮೂರು ಕಳಸಗಳಿವೆ. ಗರ್ಭಗೃಹದ ಮೇಲೆ ಪಗೋಡಾಪದ್ಧತಿಯ ಶಿಖರವಿದೆ. ಇದರ ಮೇಲೆ ಬಂಗಾರದ ನೀರು ಕುಡಿಸಿದ ಕಳಸವಿದೆ. ಗರ್ಭಗೃಹದಲ್ಲಿ ಸಾಲಿಗ್ರಾಮಶಿಲೆಯ ಧ್ಯಾನಮುದ್ರೆಯಲ್ಲಿರುವ ನಾರಾಯಣ ಮೂರ್ತಿ ಇದೆ. ಇದಕ್ಕೆ ಚತುರ್ಭುಜಗಳಿವೆ. ಎರಡು ಕೈಗಳು ಧ್ಯಾನಮುದ್ರೆಯಲ್ಲೂ ಉಳಿದೆರಡು ಕೈಗಳಲ್ಲಿ ಶಂಖಚಕ್ರಗಳುಂಟು. ನಾರಾಯಣ ಮೂರ್ತಿಗೆ ಸದಾ ಸುವರ್ಣದ ಮುಖವಾಡವಿರುತ್ತದೆ. ಶಿರದಮೇಲೆ ವಜ್ರ ಖಚಿತ ಸುವರ್ಣ ಕಿರೀಟವಿದೆ. ನಾರಾಯಣನ ಬಲಬದಿಯಲ್ಲಿ ಕುಬೇರ, ಗಣೇಶ ಮತ್ತು ಗರುಡ ಮೂರ್ತಿಗಳಿವೆ; ಎಡಬಲದಲ್ಲಿ ಲಕ್ಷ್ಮಿ ಚವರಿ ಬೀಸುತ್ತ ನಿಂತಿದ್ದಾಳೆ. ದೇವಾಲಯದ ಪ್ರಾಕಾರದಲ್ಲಿ ಪ್ರತ್ಯೇಕ ಲಕ್ಷ್ಮೀ ಗುಡಿಯೂ ಶಂಕರಾಚಾರ್ಯರ ಪೀಠವೂ ಇವೆ.

	ಬದರೀನಾಥಕ್ಷೇತ್ರ ವೈಷ್ಣವ ಕ್ಷೇತ್ರವಾದರೂ ಇಲ್ಲಿರುವ ಬ್ರಹ್ಮಕಪಾಲ ಕ್ಷೇತ್ರವನ್ನು ಆಧಾರವಾಗಿಟ್ಟುಕೊಂಡು ಮೂಲತಃ ಇದೊಂದು ಶೈವಕ್ಷೇತ್ರವೆಂಬುದಾಗಿ ಕೆಲ ವದಂತಿಗಳಿವೆ. ಈ ಬ್ರಹ್ಮಕಪಾಲದಲ್ಲಿ ಸಂಪ್ರದಾಯಸ್ಥರು ಪಿತೃಗಳಿಗೆ ಪಿಂಡಗಳನ್ನರ್ಪಿಸುತ್ತಾರೆ.

	ಬದರೀ ಹತ್ತಿರ ಕೇಶವಪ್ರಯಾಗವೆಂಬ ಗ್ರಾಮವಿದೆ. ಸರಸ್ವತೀ ನದೀ ತೀರದಲ್ಲಿ ಬದರೀಕಾಶ್ರಮ, ವ್ಯಾಸಗುಹೆಗಳಿವೆ. ವ್ಯಾಸರು ಇಲ್ಲಿ ಭಾರತ ಭಾಗವತ ಗ್ರಂಥಗಳನ್ನು ರಚಿಸಿದರೆಂದು ಹೇಳಲಾಗುತ್ತದೆ. ಶಂಕರಾಚಾರ್ಯರು ಇಲ್ಲಿಯೇ ಇದ್ದು ಭಾಷ್ಯಗಳನ್ನು ರಚಿಸಿದರೆಂದು ವದಂತಿ. ವೈಷ್ಣವ ಮತಪ್ರವರ್ತಕ. ದ್ವೈತತತ್ತ್ವ ವಿಚಾರ ಸ್ಥಾಪನಾಚಾರ್ಯರಾದ ಮಧ್ವಾಚಾರ್ಯರು ತಮ್ಮ ಕಾರ್ಯಮುಗಿದ ಬಳಿಕ ಈ ಆಶ್ರಮಕ್ಕೆ ಬಂದು ಸಮಾಧಿಸ್ಥರಾದರೆಂದು ಹೇಳಲಾಗುತ್ತದೆ. ಅವರ ಹೆಸರಿನಲ್ಲಿ ವೃಂದಾವನವನ್ನು ಕಟ್ಟಿದ್ದಾರೆ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ